ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಪಾತ್ರಾವಲೋಕನ

ಲೇಖಕರು :
ರಾಜ್ ಕುಮಾರ್
ಶುಕ್ರವಾರ, ನವ೦ಬರ್ 1 , 2013

“ಕೇಳು ಜನಮೇಜಯನೆ ಕುರುಕುಲ ಮಾನಧನನಿಗೆ ಗೈದ ದ್ರೋಹವ……”

ಕುರುಕ್ಷೇತ್ರದ ಯುದ್ದದ ಕೊನೆಯಲ್ಲಿ ಭೀಮನಿಂದ ಕೌರವ ಹತನಾದಾಗ ದ್ರೋಣ ಪುತ್ರ ಅಶ್ವತ್ಥಾಮ ಕ್ರೋಧಗೊಂಡು ಸಿಡಿಲಿನಂತೆ ಪ್ರವೇಶಿಸುವ ಸನ್ನಿವೇಶದ ಪದವಿದು. ಆರಂಭದಿಂದಲೇ ಪ್ರಸಂಗಕ್ಕೆ ಕಿಚ್ಚು ಹಚ್ಚಿದಂತಾಗಿ ಪ್ರಸಂಗ ನಡೆ ತೀವ್ರವಾಗಿರುತ್ತದೆ. ರೋಮಾಂಚಿತನಾಗುವ ಪ್ರೇಕ್ಷಕ ವೃಂದ ಪ್ರಸಂಗದ ಮುಂದಿನ ನಡೆಗೆ ಕಾತುರವಾಗುತ್ತ ಬಂದ ಅಶ್ವತ್ಥಾಮನ ದಿಗಿಣವನ್ನು ನೋಡುತ್ತದೆ. ಈ ದಿಗಿಣದಿಂದಲೇ ಕಥೆಯ ಮುಂದಿನ ಹಂದರವನ್ನು ಮರೆಯಬಾರದಲ್ಲ? ಕುರುಕ್ಷೇತ್ರದ ಯುದ್ದ ಮುಗಿದ ನಂತರ ಕೊನೆಯದಿನ ರಾತ್ರಿ ಅಶ್ವತ್ಥಾಮನ ರಾತ್ರಿಯಾಗಿಬಿಡುತ್ತದೆ. ತಾನು ಬ್ರಾಹ್ಮಣನೆಂಬುದನ್ನು ಮರೆತು ಪೈಶಾಚಿಕ ಕೃತ್ಯವನ್ನೇ ಎಸಗಿಬಿಡುತ್ತಾನೆ. ಘೋರ ರಾತ್ರಿಯ ಭೀಭತ್ಸ ಸನ್ನಿವೇಶದ ಚಿತ್ರಣವೇ ರಕ್ತ ರಾತ್ರಿ ಪ್ರಸಂಗ. ರನ್ನನ ಗಧಾಯುದ್ದದ ಹಲವಾರು ಪದಗಳನ್ನು ಹೊಸೆದು ಸೃಷ್ಟಿಸಿದ ಜನಪ್ರಿಯ ಪ್ರಸಂಗವಿದು.

ಪುತ್ತೂರು ಶ್ರೀಧರ ಭ೦ಡಾರಿ ’ರಕ್ತ ರಾತ್ರಿ’ಯ ಅಶ್ವಥ್ಥಾಮನ ಪಾತ್ರದಲ್ಲಿ.
ತನ್ನೊಡೆಯ ಸುಯೋಧನನ್ನು ಅರಸುತ್ತಾ ಕತ್ತಲೆಯಲ್ಲಿ ರಣಭೂಮಿಗೆ ಕಾಲಿಡುವ ಅಶ್ವತ್ಥಾಮ, ಅದೃಷ್ಟ ಲಕ್ಷ್ಮೀ ಮೊದಲಾದ ಲಕ್ಷ್ಮೀ ತ್ರಯರು ಕೌರವನಿಂದ ದೂರಾಗಿ ಪಾಂಡವರ ಬಿಡದಿಯತ್ತ ಸಂಚರಿಸುವುದನ್ನು ನೋಡಿ ತಡೆದು ನಿಲ್ಲಿಸುತ್ತಾನೆ. ಕೌರವನ ಸುದಿನಗಳು ಮುಗಿದುದರ ಸಂಕೇತವಾಗಿ ಅವರ ನಿರ್ಗಮನವನ್ನು ಅರ್ಥವಿಸಿಕೊಳ್ಳುತ್ತಾನೆ. ಕಟು ಸತ್ಯವನ್ನು ನಂಬಲಾಗದೇ ಕೌರವನ ಮೇಲಿನ ಅಂಧಾಭಿಮಾನ ಅವನನ್ನು ಭ್ರಾಂತನನ್ನಾಗಿಸುತ್ತದೆ. ಆ ಆವೇಶದಿಂದ ಲಕ್ಷ್ಮೀತ್ರಯರನ್ನು ಬಲವಂತವಾಗಿ ಎಳೆದೊಯ್ದು ಕೌರವನ ಜಂಘೆಗೆ ಎಸೆಯುತ್ತಾನೆ. ತನ್ನಿಂದೇನಾಗಬೇಕು? ಇನ್ನಾದರೂ ಸೇನಾ ಪತಿತ್ವವನ್ನು ಕೊಡುವಂತೆ ಅವೇಶದಿಂದ ಕೇಳುತ್ತಾನೆ. ಅದಾಗಲೇ ಸೇನೆಯೆಲ್ಲ ಬರಿದಾಗಿದ್ದರೂ ಅದರ ಅಧಿಪತಿತ್ವವನ್ನು ಕೇಳುವುದು ಒಂದು ವಿಪರ್ಯಾಸದಂತೆ ಭಾಸವಾದರೂ ಕೊನೇಯ ಉಸಿರಿನವರೆಗೂ ಪಾಂಡವ ದ್ವೇಷವನ್ನು ಗೆಲ್ಲಲಾಗದ ಸೂಯೋಧನ ಕಟ್ಟ ಕಡೆಯದಾಗಿ ’ನಿಷ್ಪಾಂಡವ ಪೃಥ್ವಿ ’ ಎಂಬ ವಿಚಿತ್ರ ಬೇಡಿಕೆಯನ್ನು ಮುಂದಿಡುತ್ತಾನೆ. ಕೇವಲ ಐದು ತಲೆಗಳ ಸನ್ನೆಯನ್ನಷ್ಟೇ ತೋರಿದರೂ ಅಶ್ವಾತ್ಠಾಮ ಕೌರವನ ಇಂಗಿತವನ್ನು ಅರಿತು ಅಲ್ಲಿಂದ ಪಾಂಡವರ ಬಿಡದಿಯತ್ತ ಆ ನಡುವಿರುಳೇ ತೆರಳುತ್ತಾನೆ. ಮುಂದೆ ನಡೆಯುವುದೇ ಮಹಾಭಾರತ ಯುದ್ದದ ಕೊನೆಯ ಅತ್ಯಂತ ಭೀಭತ್ಸ ಮಯ ರಾತ್ರಿಯಾಗುತ್ತದೆ. ಮತಿ ಭ್ರಾಂತನಂತೆ ಪ್ರವರ್ತಿಸುವ ಅಶ್ವತ್ಥಾಮ ಅ ಒಂದು ರಾತ್ರಿಯನ್ನು ರಕ್ತರಾತ್ರಿಯನ್ನಾಗಿ ಮಾಡಿಬಿಡುತ್ತಾನೆ. ಪಾಂಡವರೆಂದು ತಿಳಿದು ದ್ರೌಪದೀ ಪುತ್ರರ ತಲೆಯನ್ನು ಮಲಗಿದಲ್ಲೇ ಕಡಿಯುತ್ತಾನೆ. ಯಾವುದನ್ನೂ ಸಾಧಿಸಲಾಗದೇ ಹುಚ್ಹನಾಗಿಬಿಡುತ್ತಾನೆ.

ಈ ಪ್ರಸಂಗದ ಕಥೆ ಬಹಳ ಸರಳವಾಗಿದೆ. ಆದರೆ ಇದು ಪ್ರೇಕ್ಷಕನ ಮನಸ್ಸಿನಲ್ಲಿ ಎಷ್ಟು ಅಚ್ಚೋತ್ತಿರುತ್ತದೆ ಎಂಬುದು ವಿವೇಚನೆಗೆ ಬಿಟ್ಟ ವಿಚಾರ. ಯಾಕೆಂದರೆ ಒಂದೋಂದು ಪದಕ್ಕೂ ಅಭಿನಯ ಮತ್ತು ಮಾತಿಗಿಂತಲೂ ಅಧಿಕ ಕುಣಿತಕ್ಕೆ ಮೀಸಲಾಗಿರಿಸಿದರೆ ಕಥಾಭಾಗ ಅಚ್ಚೊತ್ತುವುದಾದರೂ ಹೇಗೆ? ರಾಮಾಯಣ ಕೇಳಿ ರಾಮನೀಗೆ ಸೀತೆ…. ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಕಲಾವಿದರ ಜವಾಬ್ದಾರಿ ಇರುವುದು ಇಲ್ಲೇ ಆದರೂ ಪ್ರೇಕ್ಷಕ ಗಮನಿಸಿಕೊಳ್ಳಬೇಕಾದ ಹಲವು ಅಂಶಗಳು ಇನ್ನೂ ಇರುತ್ತವೆ. ಹಲವು ಸಲ ಅನ್ನಿಸುವುದಿದೆ ಕಲಾವಿದ ತನ್ನ ಕಲೆಯಲ್ಲಿ ಹೇಗೆ ಪಳಗಬೇಕೋ ಪ್ರೇಕ್ಷಕ ಅದನ್ನು ಅಸ್ವಾದಿಸುವುದರಲ್ಲೂ ಪಳಗಬೇಕು. ಯಕ್ಷಗಾನದಂತಹ ಕಲೆಯನ್ನು ಅಸ್ವಾದಿಸುವುದನ್ನೂ ಕಲಿತುಕೊಳ್ಳದಿದ್ದರೆ ಕಲೆ ಕೊಳದ ನೀರಾಗುತ್ತದೇ ಹೊರತು ತೊರೆಯ ನೀರಾಗುವುದಿಲ್ಲ. ಯಾವುದೇ ಕಲೆಯ ಬೆಳವಣಿಗೆ ಇರುವುದು ಅದನ್ನು ಪೂರ್ಣವಾಗಿ ಅನುಭವಿಸುವ ಪ್ರೇಕ್ಷಕನಿದ್ದಲ್ಲಿ. ಇಲ್ಲವಾದರೆ ಹಸಿವಿಲ್ಲದವನಿಗೆ, ರೋಗಗ್ರಸ್ಥನಿಗೆ ಮೃಷ್ಠಾನದ ಭೋಜನ ಎದುರು ಇರಿಸಿದಂತೆ.

ರಕ್ತ ರಾತ್ರಿ ಪ್ರಸಂಗದಲ್ಲಿ ವೀರಾವೇಶದಿಂದ ಪ್ರವೇಶವಾಗುವ ಅಶ್ವತ್ಥಾಮನ ಪಾತ್ರ ಕ್ರೋಧಾವಿಷ್ಟನಾಗಿಯೇ ಇರುವುದು ಮಾತ್ರವಲ್ಲ ಅತ್ಯಂತ ವಿಲಕ್ಷಣ ವ್ಯಕ್ತಿತ್ವವನ್ನೂ ತೋರುವುದು ಪಾತ್ರದ ಔಚಿತ್ಯ. ಆದರೆ ವಿಪರ್ಯಾಸವೆಂದರೆ ಇಂದು ಬರೀ ಕುಣಿತ ಮತ್ತು ದೃಶ್ಯವೈಭವಕ್ಕಷ್ಟೇ ಸೀಮಿತವಾಗಿ ವೇಗದ ನಡೆಯನ್ನಷ್ಟೇ ಪ್ರಸಂಗದಲ್ಲಿ ಕಾಣಬಹುದು. ಕಲಾವಿದರಲ್ಲಿ ಕೆಲವರು ಅಶ್ವತ್ಥಾಮನ ವ್ಯಕ್ತಿತ್ವವನ್ನು ಅರ್ಥವಿಸಿಕೊಂಡು ಸನ್ನಿವೇಶಕ್ಕೆ ತಕ್ಕ ಅಭಿನಯಿಸಿದರೂ ಸಹ ಪ್ರೇಕ್ಷಕರು ಅಶ್ವತ್ಥಾಮನ ವ್ಯಕ್ತಿತ್ವದ ಅಭಿವ್ಯಕ್ತಿಯತ್ತ ಗಮನ ಹರಿಸುವುದೇ ಇಲ್ಲ. ಬದಲಾಗಿ ದಿಗಿಣದ ಲೆಕ್ಕಾಚಾರ ಮತ್ತು ಕುಣಿತದಲ್ಲೇ ಮೈಮರೆತು ಏನು ನೋಡಬೇಕೋ ಅದನ್ನು ಸವಿಯದೇ ವಂಚಿತರಾಗುತ್ತಾರೆ. ವಂಚಿತರಾಗುವುದು ಮಾತ್ರವಲ್ಲ ನಿಜ ಅಸ್ವಾದನೆಯನ್ನೇ ಮರೆತು ಬಿಡುತ್ತಾರೆ.

ಪ್ರತಿಯೋಂದು ಪ್ರಸಂಗದ ಪ್ರತೀ ಪಾತ್ರವೂ ಒಂದು ದೃಷ್ಟಿಕೋನದಿಂದ ಚಿತ್ರಿಸಲ್ಪಡಬೇಕು ಆ ದೃಷ್ಟಿಕೋನ, ಪಾತ್ರದ ವ್ಯಕ್ತಿತ್ವದ ಔಚಿತ್ಯವನ್ನು ಹೊಂದಿರಬೇಕು. ಪ್ರೇಕ್ಷಕನೂ ಆ ನಿಟ್ಟಿನಲ್ಲೇ ವೀಕ್ಷಿಸಿದರೆ ಯಕ್ಷಗಾನದ ರಸಾಸ್ವಾದನೆಯನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತದೆ. ಆದರೆ ಇಂದು ಪಾತ್ರವನ್ನು ಯೋಜನಾ ಬದ್ಧವಾಗಿ ಕಟ್ಟುವ ಕಲಾವಿದರ ಸಂಖ್ಯೆ ಕ್ಷೀಣಿಸುವುದು ಮಾತ್ರವಲ್ಲ ಯಾವುದನ್ನು ಹೇಗೆ ಆಸ್ವಾದಿಸಬೇಕೋ ಹಾಗೇ ಅಸ್ವಾದಿಸುವ ಪ್ರೇಕ್ಷಕನ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುತ್ತಿದೆ. ಪಾತ್ರಧಾರಿ ಒಂದಷ್ಟು ಹೊತ್ತು ವಿಚಿತ್ರವಾಗಿ ಕುಣಿದಾಗ ಅದೇ ಅಭಿನಯವೆಂದು ಭಾವಿಸಲ್ಪಡುತ್ತದೆ. ಕುಣಿದ ಮೇಲೇ ಪಾತ್ರಕ್ಕೆ ಔಚಿತ್ಯವಾಗಿ ಅರ್ಥಗಾರಿಕೆಯೂ ಒಂದು ಅಭಿವ್ಯಕ್ತಿ ಮಾರ್ಗವೆಂದು ಮರೆತು ಬಿಡುವ ಪ್ರಮೇಯವೇ ಹೆಚ್ಚು. ಪ್ರೇಕ್ಷಕನೂ ಅದರತ್ತ ಗಮನ ಹರಿಸದೇ ಏಕತಾನತೆಯ ಕುಣಿತಕ್ಕೆ ಚಪ್ಪಾಳೆ ಹೊಡೆಯುತ್ತಾನೆ. ಪರಿಣಾಮ ಕಲೆಯ ಸತ್ವ ದರ್ಶನವಾಗದೇ ಕಲೆ ಅನಾಥವಾಗುತ್ತದೆ.

ಲಕ್ಷೀತ್ರಯರ ಸೆಳೆದು ಕೊಂಡುಯ್ಯುವಾಗ ಕೇವಲ ಮಂದಲೆಗೆ ಕೈ ಯಿಕ್ಕಿ ಎಳೆದೊಯ್ಯುವುದರ ಬದಲು ಸಾಮಾನ್ಯ ನಾಟಕದಂತೆ ಅವರನ್ನು ಬಲಾತ್ಕರಿಸಲು ಬೆಂಬತ್ತಿದಂತೆ ಅಭಿನಯಿಸುವುದು ಪಾತ್ರಕ್ಕೂ ಔಚಿತ್ಯವೆನಿಸುವುದಿಲ್ಲ. ಪ್ರಸಂಗಕ್ಕೂ ಔಚಿತ್ಯವೆನಿಸುವುದಿಲ್ಲ. ಹಾಗಾಗಿ ಪಾತ್ರದ ನಿಜವಾದ ವ್ಯಕ್ತಿತ್ವ ಮತ್ತು ಸನ್ನಿವೇಶ ಏನೆಂದು ಗಮನ ಹರಿಸಬೇಕಾಗುತ್ತದೆ. ಪ್ರೇಕ್ಷಕನೂ ಅಷ್ಟೇ ಇಂದು ಕಥಾ ಸಾರಾಂಶವಾಗಲೀ ಸನ್ನಿವೇಶವನ್ನಾಗಲೀ ಅರಿಯದೇ ಇರುವವರು ಬಹಳ ಕಡಿಮೆ. ಹಾಗಾಗಿ ಪ್ರೇಕ್ಶಕರೂ ಸಹ ಇಂತಹ ಸೂಕ್ಷ್ಮ ವಿಚಾರವನ್ನು ಗಮನಿಸದೇ ಯಕ್ಷಗಾನವನ್ನು ವೀಕ್ಷಿಸಿದರೇ ಆ ಕಲೆಯ ನಿಜವಾದ ಅಸ್ವಾದನೆ ಸಾಧ್ಯವಾಗುವುದಿಲ್ಲ. ಪ್ರತೀ ಪಾತ್ರಕ್ಕೂ ಒಂದು ವ್ಯಕ್ತಿತ್ವ ಎಂಬುದು ಇರುತ್ತದೆ. ಅದು ಅಭಿವ್ಯಕ್ತವಾಗದೇ ಇದ್ದರೆ ಕಲೆ ಸೋತಂತೆ ಅಲ್ಲವೇ? ಅಶ್ವತ್ಥಾಮ ಕಾಮಾಂಧನಂತೆಯೋ ರಾಕ್ಷಸನಂತೆಯೋ ಚಿತ್ರಿಸಲ್ಪಟ್ಟರೆ ಅದೆಷ್ಟು ಅಭಾಸವನ್ನುಂಟು ಮಾಡುತ್ತದೆ? ಆದರೆ ಆಟ ಒಟ್ಟು ರೈಸಿದರೆ ಸಾಕು ಎಂಬ ಭಾವದಲ್ಲಿ ಯಾವುದೂ ಇಲ್ಲಿ ಸಲ್ಲುವಂತಾಗುತ್ತದೆ.

***************

ಚಕ್ರವ್ಯೂಹ ಪ್ರಸಂಗದ ಸನ್ನಿವೇಶ

“ಕಾಮ ಪಿತನಿದ ಬಲ್ಲನಾ,, ಬಲರಾಮ ನರಿವನು ಪಾರ್ಥ ತಿಳಿವನು | ಭೂಮಿಯಲಿ ಸುರಪತಿಯ ಮೊಮ್ಮನು ಬಲ್ಲ ಹೋಗಲಿಕೆ | ಕ್ಷೇಮದಲಿ ಬರಲರಿಯ ಅವನೀ ಸೀಮೆಯಲಿ ಮಿಕ್ಕವರ ಕಾಣೆನು| ಹಾ ಮಹಾ ದೇವನುತ ಚಿಂತಿಸುತನೀರ್ದನು ಅವನೀಶ ||



ಅಭಿಮನ್ಯು ಮತ್ತು ಸುಭದ್ರೆ ಪಾತ್ರದಲ್ಲಿ ಸ೦ಪಾಜೆ ದಿವಾಕರ ರೈ ಹಾಗೂ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ
ಧರ್ಮರಾಯ ಚಕ್ರವ್ಯೂಹವನ್ನು ಭೇದಿಸಬಲ್ಲವರು ಯಾರು ಎಂದು ಚಿಂತಿಸುತ್ತಾನೆ. ಯಾರೂ ಇಲ್ಲ ಎಂದು ಕಣ್ಣೀರಿಡುವಾಗ ವೀರಾವೇಶದಿಂದ ಅಭಿಮನ್ಯುವಿನ ಪ್ರವೇಶವಾಗುತ್ತದೆ. ಅಭಿಮನ್ಯುವಿನ ರಭಸದ ಪ್ರವೇಶವೇ ಪ್ರಸಂಗದ ದಿಕ್ಷೂಚಿ. ಮಂದ್ರವಾಗಿದ್ದ ಸನ್ನಿವೇಶಕ್ಕೆ ಏಕಾಏಕಿ ಕಿಚ್ಚು ಹತ್ತಿಸುತ್ತಾನೆ ಅಭಿಮನ್ಯು. ಆ ಪ್ರವೇಶ ಮಿಂಚಿನಂತೆ ಪ್ರೇಕ್ಷಕನನ್ನು ಬಡಿದೆಬ್ಬಿಸಿದಲ್ಲಿ ಕಲಾವಿದನ ಅರ್ಥ ಕೆಲಸ ಮುಗಿದಂತೆ. ಇಂದು ಇದರಲ್ಲೂ ಏಕತಾನತೆ ಬಂದಿದೆ. ಹಾಗಾಗಿ ಬಲಿಪ್ಪರು ಇಂದಿಗೂ ಕೋಳ್ಯೂರು ರಾಮಚಂದ್ರರಾಯರ ಅಭಿಮನ್ಯುವನ್ನು ನೆನಪಿಸಿಕೊಳ್ಳುತ್ತಾರೆ. ಅದೆಂತಹ ಪ್ರವೇಶ..? ಯಾವುದೇ ಪಾತ್ರವಾದರೂ ಅದರಲ್ಲಿ ಪರಕಾಯ ಪ್ರವೇಶ ಮಾಡಿ ಪಾತ್ರವೇ ತಾವಾಗಿ ಆವೇಶದಿಂದ ಲೀನವಾಗುವುದು ರಾಯರ ವೈಶಿಷ್ಟ್ಯ. ಮತ್ತೆ ಕೇಳಬೇಕೆ. ಚೆಂಡೆಯ ಬಡಿತಕ್ಕೆ ಕುರುಕ್ಷೇತ್ರ ಮನೆಯಂಗಳದಲ್ಲೇ ಇದೆ ಎಂದು ಪ್ರವೇಶಿಸುವ ಆ ವೇಗದ ತುಡಿತ ಕೇವಲ ಅಭಿಮನ್ಯುವಿನ ಪಾತ್ರವನ್ನಷ್ಟೇ ಅಲ್ಲ ಸಹಪಾತ್ರವನ್ನೂ ಆವೇಶ ಬರುವಂತೆ ಮಾಡುತ್ತದೆ. ಇದೇ ವೇಗ ಪ್ರಸಂಗದಲ್ಲಿ ನಿರಂತರ ಕಾಯ್ದು ಕೊಂಡು ಬರಬೇಕಾಗುತ್ತದೆ. ಅದು ತಾಯಿ ಸುಭದ್ರೆ ಮತ್ತು ಅಭಿಮನ್ಯುವಿನ ಭಾವನಾತ್ಮಕ ಸನ್ನಿವೇಶದಲ್ಲೂ ಆ ತುಡಿತ ಪ್ರೇಕ್ಷಕನಿಗೆ ಮನದಟ್ಟು ಮಾಡಬೇಕಾಗುತ್ತದೆ. ಚಿತ್ರ ವಿಚಿತ್ರವಾಗಿ ಒಂದು ಪದ ಅರ್ಧ ತಾಸಿಗೂ ಮಿಕ್ಕಿ ಎಳೆದರೆ ಒಟ್ಟು ಪ್ರಸಂಗದ ಭಾವಕ್ಕೇ ಕೊಡಲಿ ಏಟು ಕೊಟ್ಟಂತಾಗುತ್ತದೆ. ಕುಣಿತದಲ್ಲೂ ಪಾತ್ರದ ವ್ಯಕ್ತಿತ್ವ ಗೋಚರವಾಗಬೇಕು. ಸನ್ನಿವೇಶದ ಧಾವಂತ ವ್ಯಕ್ತವಾಗುವಂತಿರಬೇಕು. ಆದರೆ ಇದೆಲ್ಲ ಈಗಿನ ನವೀಕರಣದಲ್ಲಿ ಗಮನಾರ್ಹ ಎನಿಸದೇ ಇರುವುದು ವಿಪರ್ಯಾಸ. ಪಾಂಡವ ಪಾಳಯಕ್ಕೇ ಅಂಧಕಾರದ ಚಕ್ರವ್ಯೂಹ ಸುತ್ತಿರುವಾಗ ಇಲ್ಲಿ ಅಭಿಮನ್ಯು ಚಿತ್ರ ವಿಚಿತ್ರ ಕುಣಿತದ ಸರ್ಕಸ್ ಮಾಡುತ್ತಿದ್ದರೆ ಸನ್ನಿವೇಶದ ಗಾಂಭೀರ್ಯವೇ ಹೊರಟು ಹೋಗುತ್ತದೆ.

ಮೊದಲ ದೃಶ್ಯದಿಂದಲೇ ಪಾತ್ರವನ್ನು ಕೊಂಡೊಯ್ಯುವ ದೃಷ್ಟಿಕೋನವನ್ನು ಹೊಂದಿರಬೇಕು. ಅದಕ್ಕೆ ಪಾತ್ರದ ವ್ಯಕ್ತಿತ್ವ ಅರಿತಿರುವುದು ಬಹಳ ಮುಖ್ಯವೆನಿಸುತ್ತದೆ. ರಾವಣನಾದವ ಕುಂಭಕರ್ಣನ ನಡೆಯನ್ನು ಅನುಸರಿಸಿದರೆ ಸಹ್ಯವಾಗುತ್ತದೆಯೇ? ಪಾತ್ರ ಎಷ್ಟೇ ಚಿಕ್ಕದಾದರೂ ಸರಿ ಅದರ ವ್ಯಕ್ತಿತ್ವದ ಛಾಪು ಮೂಡದಿದ್ದರೆ ಪಾತ್ರಧಾರಿಯೊಂದಿಗೆ ಪಾತ್ರವೂ ಸೋಲುತ್ತದೆ, ಪ್ರಸಂಗವೂ ಸೋಲುತ್ತದೆ, ಪರ್ಯಾಯವಾಗಿ ಕಲೆಯೂ ಕಮರಿಹೋಗುತ್ತದೆ.

***************
ಬಹಳ ಹಿಂದೆ ದಮಯಂತಿ ಸ್ವಯಂವರ ಎಂಬ ಪ್ರಸಂಗ ನೋಡಿದ್ದೆ. ಪ್ರಸಂಗ ತಿಳಿದವರಿಗೆ ಗೊತ್ತಿರುತ್ತದೆ ಅದರಲ್ಲಿ ಬರುವ ಪುಷ್ಕರನ ಪಾತ್ರದ ಸಮಯ ಎಷ್ಟು ಚಿಕ್ಕದು ಎಂದು. ಆದರೆ ಪಳಗಿದ ಕಲಾವಿದ ಪಾತ್ರದ ಕಾಯವನ್ನು ಪ್ರವೇಶ ಮಾಡಿದರೆ...?? ಆದಿನ ಮಲ್ಪೆ ವಾಸುದೇವ ಸಾಮಗರು ಆ ಪಾತ್ರವನ್ನು ಮಾಡಿದ್ದರು. ಪಾತ್ರದ ಪ್ರವೇಶದಿಂದಲೂ ಈ ಪಾತ್ರವನ್ನು ಹೀಗೆ ಎಂದು ಯೋಜನಾಬದ್ದವಾಗಿ ರಂಗದಲ್ಲಿ ತಂದರು. ಅಭಿನಯದಿಂದ, ಅರ್ಥಗಾರಿಕೆಯಿಂದ ಕುಣಿತದಿಂದ ’ಪುಷ್ಕರ ’ ಕೇವಲ ಪಾತ್ರವಾಗಿ ಉಳಿಯಲಿಲ್ಲ. ಇಡೀ ಪ್ರಸಂಗದ ವೈಶಿಷ್ಟ್ಯದಲ್ಲಿ ಅದು ಒಂದಾದ ಪರಿ ಈಗಲೂ ನೆನಪಲ್ಲಿ ಉಳಿದು ಬಿಟ್ಟಿದೆ. ಇಂತಹ ಉದಾಹರಣೆಗಳು ಬೇಕಾದಷ್ಟು ಸಿಗುತ್ತವೆ. ಆದರೆ ಗಮನಿಸುವ ದೃಷ್ಟಿಯಿರಬೇಕು. ಹಿರಿಯ ಕಲಾವಿದರು ಪ್ರಸಂಗದಲ್ಲಿ ಹಾಗೆ ಬಂದು ಹೀಗೆ ಹೋಗುವ ಪಾತ್ರ ಮಾಡುವಾಗ ವಿಚಿತ್ರವೆನಿಸುತ್ತದೆ. ಆದರೆ ಅದರಲ್ಲೂ ಅವರು ಮೂಡಿಸುವ ಛಾಪು ಮುಖ್ಯವೆನಿಸಲ್ಪಡುತ್ತದೆ. ಇಲ್ಲಿ ಕಲಾವಿದನ ನೈಪುಣ್ಯ ಯಾವ ಬಗೆಯಲ್ಲಿರುತ್ತದೆಯೋ ಅದೇ ಬಗೆಯಲ್ಲಿ ಗಮನಿಸುವ ಪ್ರೇಕ್ಷಕನೂ ಇರಬೇಕಾಗುತ್ತದೆ. ಇಲ್ಲವಾದಲ್ಲಿ ರಾಗಜ್ಞಾನ ಇಲ್ಲದವನಲ್ಲಿ ಇಂಪಾದ ಸಂಗೀತ ಹಾಡಿದರೆ ಬರೀ ಇಂಪು ಮಾತ್ರವೇ ಉಳಿದು ರಾಗದ ಪ್ರಭಾವವೇ ಉಳಿಯುವುದಿಲ್ಲ. ಸಂಗೀತದ ಸಂಪೂರ್ಣ ಸಂವೇದನೆ ಸೃಷ್ಟಿಯಾಗುವುದಿಲ್ಲ. ಕಲಾವಿದನ ಶ್ರಮವೂ ನಿರರ್ಥಕವೆನಿಸಿಬಿಡುತ್ತದೆ.

ಸಮಗ್ರವಾಲಿ ಪ್ರಸಂಗದ ವಾಲಿಯ ಪಾತ್ರವನ್ನು ಒಂದೇ ಪ್ರಸಂಗದಲ್ಲಿ ಹಲವರು ಮಾಡುವಾಗ ಪಾತ್ರ ಮನೋಭಾವದ ವೈವಿಧ್ಯತೆಯ ನಡುವೆಯೂ ಒಂದು ತಂತು ಬೆಸೆಯಲ್ಪಡಬೇಕು. ವಾಲಿಯ ವ್ಯಕ್ತಿತ್ವ ಹಂತ ಹಂತವಾಗಿ ಬದಲಾಗಿ ಹೋಗುತ್ತ ಕೊನೆಯಲ್ಲಿ ಮೂಲ ವ್ಯಕ್ತಿತ್ವದಿಂದ ಭಿನ್ನವಾಗಿ ವಾಲಿ ಬದಲಾಗುವುದುಂಟು. ಈ ನೆಲೆಯಲ್ಲಿ ಕಲಾವಿದನೂ ಆ ಮನೋಭಾವಕ್ಕೆ ಅನುಸರಿಸಿ ಬದಲಾವಣೆಯನ್ನು ತರುತ್ತಾನೆ. ಅದೇ ರಾಮನ ಪಾತ್ರದಲ್ಲಿ ಆರಂಭದಿಂದ ಅಂತ್ಯದವರೆಗೂ ಪಾತ್ರದ ಸ್ವಭಾವ ಬದಲಾಗುವುದಿಲ್ಲ. ಯಾವುದೇ ಪ್ರಸಂಗದಲ್ಲೂ ರಾಮನ ಪಾತ್ರ ಸ್ವಭಾವ ಒಂದೇ ಆಗಿರುತ್ತದೆ. ಇದು ಬಹಳ ವೈಶಿಷ್ಟ್ಯ ಮಾತುಗಾರಿಕೆಯಲ್ಲಿ ಗಾಂಭೀರ್ಯ ತುಂಬಿದ್ದರೆ ಕುಣಿತದಲ್ಲೂ ಅಷ್ಟೆ, ರಾಮನ ಪಾತ್ರದ ಕುಣಿತದಲ್ಲಿ ಅತ್ಯಂತ ವೈಶಿಷ್ಟ್ಯತೆ ಇರುತ್ತದೆ. ರಾಮನ ವೇಷ ದಿಗಿಣವನ್ನು ಕುತ್ತು ಹಾರಿ ಹಾಕಬಾರದೇದೆಂದಿದೆ. ಇದು ಪುರಾಣದಲ್ಲಿ ಬರುವ ಅತ್ಯಂತ ಆದರ್ಶಮಯ ಪಾತ್ರ.

ಪುತ್ತೂರು ನಾರಾಯಣ ಹೆಗಡೆ
ಹಿಂದಿನ ಹಲವು ಹಿರಿಯ ಕಲಾವಿದರು ಒಂದೇ ಪ್ರಸಂಗದಲ್ಲಿ ವೈವಿಧ್ಯಮಯ ಪಾತ್ರವನ್ನು ಮಾಡುವಾಗ ಅವರಿಗಿರುವ ಧನಾತ್ಮಕ ಗುಣಗಳಿಂದ ತಮ್ಮ ಋಣಾತ್ಮಕ ಗುಣಗಳನ್ನು ಮರೆಸಿಬಿಡುತ್ತಿದ್ದರು. ಕುಣಿತ ಇಲ್ಲದಿದ್ದರೇನಂತೆ, ಮಾತುಗಾರಿಕೆ ಇಲ್ಲದಿದ್ದರೇನು? ಸಮಯ ಪ್ರಜ್ಞೆಯ ಅಭಿನಯ ರಂಗವನ್ನು ಉಪಯೋಗಿಸಿಕೊಳ್ಳುವ ರೀತಿ, ಒಂದು ಪಾತ್ರ ರಂಗದ ಮೇಲೆ ಕೇವಲ ಪಾತ್ರವಾಗಿ ಇರುತ್ತಿರಲಿಲ್ಲ. ಅದಕ್ಕಿರುವ ವ್ಯಕ್ತಿತ್ವವನ್ನು ತೋರಿಸಿಕೊಡುತ್ತಿದ್ದರು. ಪುತ್ತೂರು ನಾರಾಯಣ ಹೆಗಡೆ ದಣಿವರಿಯದೆ ಕುಣಿದದ್ದನ್ನು ನಾನು ಕಂಡಿಲ್ಲ. ಆದರೆ ರಂಗದಲ್ಲಿ ಕುಣಿತದ ಗಾಂಭೀರ್ಯಕ್ಕೆ ಎಂದೂ ಊನ ಬರುತ್ತಿರಲಿಲ್ಲ. ಅವರ ನಿರರ್ಗಳ ಮಾತುಗಾರಿಕೆ ಕೇಳಿದ್ದಿಲ್ಲ, ಆದರೆ ಅವರು ಆಡಿದ ಮಾತು ಆ ಧ್ವನಿಯ ಏರಿಳಿತ ಅದಕ್ಕೆ ಹೊಂದಿಕೆಯಾದಂತೆ ಶಾರೀರಿಕ ಅಂಗವಿನ್ಯಾಸದ ಭಾಷೆ ಅದು ಎಂತಹ ಪಾತ್ರವನ್ನಾದರೂ ರಂಗದಲ್ಲಿ ಜೀವಂತವಾಗಿರಿಸುತ್ತಿತ್ತು. ಆರಂಭದ ಪ್ರವೇಶದಿಂದಲೇ ತೊಡಗಿ ಪಾತ್ರ ರಂಗದಲ್ಲಿ ಭಿಚ್ಚಿಕೊಳ್ಳುವಾಗ ಇದು ವ್ಯಕ್ತಿಯಲ್ಲ , ಪಾತ್ರವೆಂಬ ಭ್ರಮೆಯಲ್ಲ ಎಂದನಿಸುತ್ತಿತ್ತು.

ಬಿಡಿಸಿದಂತೆ ಇಂತಹ ಹಲವು ನೆನಪಿನ ಅನುಭವಗಳು ಎಸಳು ಬಿರಿದು ನಳನಳಿಸುತ್ತವೆ. ಈಗೀಗ ಕೆಲವು ಕಲಾವಿದರು ಮಾತ್ರವೇ ಪಾತ್ರದ ವ್ಯಕ್ತಿಯಾಗಿ ಶ್ರಮವಹಿಸುತ್ತಾರೆ. ಪಾತ್ರದ ಮಾನಸಿಕ ರೂಪವೇನು. ಆ ಪಾತ್ರದ ಅಸ್ತಿತ್ವ ಏನು ಅದನ್ನರಿತು ವೈವಿಧ್ಯಮಯವಾಗಿ ರಂಗದಲ್ಲಿ ಕಟ್ಟಿಬಿಡುತ್ತಾರೆ. ಆದರೆ ಏಕತಾನತೆ ಇಲ್ಲಿಯೂ ಬಾಧಿಸುವುದುಂಟು. ವೃತ್ತಿ ಪ್ರವೃತ್ತಿ ಒಂದೇ ಆಗುವಾಗ ಎಕತಾನತೆ ಸಹಜವಾಗಿಬಿಡುತ್ತದೆ. ಆದರೂ ಓದಿದ ಪುಸ್ತಕದ ಹಾಳೆಗಳನ್ನು ಮಗುದೊಮ್ಮೆ ತಿರುವಿದಂತೆ ತಿರುವುತ್ತಿರಬೇಕು. ಮುಖ್ಯವಾಗಿ ಕಲೆಯ ಕ್ರಮಬದ್ಧ ಆಸ್ವಾದನೆಯೂ ಒಂದು ಕಲೆಯಂತೆ ಪರಿಗಣಿಸಬೇಕು. ಉಣ್ಣುವುದಕ್ಕೆ ಅರಿಯದವ ಪೂರ್ಣ ಸ್ವಾದವನ್ನೂ ಸವಿಯಲಾರ.



ಕೃಪೆ : http://yakshachintana.blogspot.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ